ಮೈಸೂರು ಪ್ರವೇಶದಲ್ಲಿ ಟ್ರಾಫಿಕ್ ಜಾಮ್‌ಗೆ ಅಂತ್ಯ! ಮಣಿಪಾಲ್ ಜಂಕ್ಷನ್‌ನಲ್ಲಿ ₹720 ಕೋಟಿ ಫ್ಲೈಓವರ್‌ಗೆ ಕೇಂದ್ರ
ಅನುಮೋದನೆ.

ಮೈಸೂರು ಪ್ರವೇಶದ ಬಳಿ ಪ್ರತಿದಿನ ಅನುಭವವಾಗುತ್ತಿದ್ದ ಭಾರಿ ಟ್ರಾಫಿಕ್ ಸಮಸ್ಯೆಗೆ ಈಗ ದೊಡ್ಡ ಪರಿಹಾರ ಸಿಕ್ಕಿದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಪ್ರಮುಖ bottleneck ಆಗಿದ್ದ ಮಣಿಪಾಲ್ ಜಂಕ್ಷನ್‌ನಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರಕ್ಕೆ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಉದ್ಯೋಗ, ಶಿಕ್ಷಣ ಹಾಗೂ ವೈಯಕ್ತಿಕ ಕೆಲಸಗಳಿಗಾಗಿ ಲಕ್ಷಾಂತರ ಮಂದಿ ಈ ಮಾರ್ಗವನ್ನು ಅವಲಂಬಿಸುತ್ತಿದ್ದಾರೆ. ಹೀಗಾಗಿ ಈ ರಸ್ತೆ ರಾಜ್ಯದ ಅತ್ಯಂತ ಬ್ಯುಸಿ ಮಾರ್ಗಗಳಲ್ಲಿ ಒಂದಾಗಿದೆ.
ಹಿಂದೆ ಮೈಸೂರು-ಬೆಂಗಳೂರು ಪ್ರಯಾಣಕ್ಕೆ 3 ರಿಂದ 4 ಗಂಟೆಗಳವರೆಗೆ ಸಮಯ ಹಿಡಿಯುತ್ತಿತ್ತು. ಹೆದ್ದಾರಿ ನಿರ್ಮಾಣದ ನಂತರ ಈ ಸಮಯ ಕಡಿಮೆಯಾದರೂ, ಮೈಸೂರಿನ ಪ್ರವೇಶದ ಬಳಿ ಸಿದ್ದಲಿಂಗಪುರ ಹಾಗೂ ಮಣಿಪಾಲ್ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆಯಾಗಿತ್ತು.
ಈ ಸಮಸ್ಯೆಗೆ ಪರಿಹಾರವಾಗಿ ಈಗ ₹720 ಕೋಟಿ ವೆಚ್ಚದಲ್ಲಿ ಫ್ಲೈಓವರ್, ಅಂಡರ್ ಪಾಸ್ ಮತ್ತು ಸರ್ವಿಸ್ ರಸ್ತೆಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪ್ರಯತ್ನದಿಂದ ಈ ಮಹತ್ವದ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಪ್ರಸ್ತುತ ಕಾಮಗಾರಿ ಭರದಿಂದ ಸಾಗುತ್ತಿದೆ. 20 ಅಡಿ ಆಳದ ಅಡಿಪಾಯದಲ್ಲಿ ಪಿಲ್ಲರ್ ನಿರ್ಮಾಣ ನಡೆಯುತ್ತಿದ್ದು, ಟಿಎಂಟಿ ಕಬ್ಬಿಣ ಮತ್ತು ಕಾಂಕ್ರಿಟ್ ಬಳಸಿ ಬಲಿಷ್ಠವಾಗಿ ನಿರ್ಮಿಸಲಾಗುತ್ತಿದೆ. ಎರಡು ವರ್ಷಗಳೊಳಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಇದಲ್ಲದೆ, ಈ ಪ್ಯಾಕೇಜ್‌ನಲ್ಲಿ ಬಿದದಿ, ಚನ್ನಪಟ್ಟಣ ಮತ್ತು ಮಂಡ್ಯ ಭಾಗಗಳಲ್ಲಿ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣವೂ ಒಳಗೊಂಡಿದೆ. ಇದರಿಂದ ರೈಲು ಸಂಚಾರ ಸುಗಮವಾಗುವುದರ ಜೊತೆಗೆ ಗ್ರಾಮೀಣ ಪ್ರದೇಶಗಳ ಸಂಪರ್ಕವೂ ಉತ್ತಮವಾಗಲಿದೆ.
ಇನ್ನೊಂದು ವಿಶೇಷತೆ ಎಂದರೆ, ಈ ಹೆದ್ದಾರಿಯಲ್ಲಿ ಸಂಚರಿಸಿದ ದೂರಕ್ಕೆ ಮಾತ್ರ ಟೋಲ್ ಶುಲ್ಕ ವಿಧಿಸಲಾಗುತ್ತದೆ. ಮಂಡ್ಯ ಜಿಲ್ಲೆಯ ಗಣಂಗೂರು, ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ ಹಾಗೂ ಬೆಂಗಳೂರಿನ ಕಣಮಿಣಕಿ ಪ್ರದೇಶಗಳಲ್ಲಿ ಟೋಲ್ ಪ್ಲಾಜಾಗಳಿವೆ.
ಈ ಯೋಜನೆ ಪೂರ್ಣಗೊಂಡ ನಂತರ ಮೈಸೂರು ಪ್ರವೇಶದ ಟ್ರಾಫಿಕ್ ಸಮಸ್ಯೆ ಬಹುತೇಕ ನಿವಾರಣೆಯಾಗಲಿದ್ದು, ಪ್ರಯಾಣ ಇನ್ನಷ್ಟು ಸುಲಭ ಮತ್ತು ವೇಗವಾಗಲಿದೆ.
